ನಿಕ್ಕೋ
	ಜಪಾನಿನ ಹಾನ್ಸೂ ದ್ವೀಪದ ತೋಚಿಗಿ ವಿಭಾಗದಲ್ಲಿರುವ ಒಂದು ಪಟ್ಟಣ. ಟೋಕಿಯೋದಿಂದ ರೈಲು ಮೂಲಕ 146 ಕಿಮೀ. ಉತ್ತರಕ್ಕೆ. ಉ.ಅ. 36(45 ಮತ್ತು ಪೂ.ರೇ. 139(37 ಮೇಲೆ, ದೈಯ ನದಿಯ ದಂಡೆಯಲ್ಲಿದೆ. ಇದೊಂದು ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಕೇಂದ್ರ. ಜನಸಂಖ್ಯೆ 28,502 (1970). ನಿಕ್ಕೋಜಾóನ್ (ಸೂರ್ಯತೇಜದ ಪರ್ವತ) ಶ್ರೇಣಿಯ ಕಣಿವೆಯಲ್ಲಿದೆ. ಬಹುಶಃ 4ನೆಯ ಶತಮಾನದಷ್ಟು ಪ್ರಾಚೀನವಾದ, ಶಿಂತೋ ಧರ್ಮದ ದೇವಾಲಯ ಮತ್ತು 767ರಲ್ಲಿ ಸ್ಥಾಪಿತವಾದ ಬೌದ್ಧ ದೇವಾಲಯ ಇಲ್ಲಿವೆ. ಅವಕ್ಕಿಂತ ಹೆಸರಾದಂಥವು ಷೋಗುನರ (ಬರ್ಬರಧ್ವಂಸಿ ದಂಡನಾಯಕರು) ಸಮಾಧಿಗಳು. ಒಟ್ಟು 13 ಸಮಾಧಿಗಳ ಪೈಕಿ ಮೊದಲನೆಯ ಷೋಗುನ್ ಇಯೆಯಾಸು ಮತ್ತು ಅವನ ಮೊಮ್ಮಗ ಇಯೆಮಿತ್ಸು ಇವರ (17ನೆಯ ಶತಮಾನ) ಸಮಾಧಿಗಳು ಪ್ರಮುಖವಾದವು. ವರ್ಣವೈಖರಿ, ಸ್ವರ್ಣಾಲಂಕರಣ ಮತ್ತು ಕುಸುರಿ ಕೆಲಸದಿಂದಾಗಿ ಈ ಸಮಾಧಿಗಳು ಆಕರ್ಷಕವಾಗಿವೆ.

	ನಿಕ್ಕೋ ನಿಸರ್ಗ ಸೌಂದರ್ಯಸ್ಥಾನವೂ ಹೌದು. ನಿಕ್ಕೋ ಕಣಿವೆಯ ಹಿನ್ನೆಲೆಯಲ್ಲಿ 1,500-2,400 ಮೀಟರ್ ಎತ್ತರದ ಪರ್ವತಗಳೂ 99 ಮೀಗಳಷ್ಟು ಎತ್ತರದ ಜಲಪತಗಳೂ ಉನ್ನತ ಸರೋವರಗಳೂ ಅನೇಕ ಖನಿಜ ಜಲ ಬುಗ್ಗೆಗಳೂ ಭವ್ಯ ಸುಂದರ ಪರಿಸರವೊದಗಿಸಿರುವುದರಿಂದ ನಿಕ್ಕೋವನ್ನು ಕಾಣದೆ (ಯಾವ ಸ್ಥಳವನ್ನೂ) ಕೆಕ್ಕೋ (ಭವ್ಯ) ಎಂದು ಕರೆಯಬೇಡ ಎಂಬ ಗಾದೆಯೇ ಜಪಾನಿನಲ್ಲಿ ಪ್ರಚಲಿತವಾಗಿದೆ.
(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ